ಲೋಪವನ್ನು ಪ್ರಚಾರ ಮಾಡಿದರೆ!
ಏಚಿಲ್ಸ್ ಎನ್ನುವ ಮಗುವಿನ ತಾಯಿ, ತನ್ನ ಮಗನನ್ನು ಮೃತ್ಯುಂಜಯನನ್ನಾಗಿ ಮಾಡಬೇಕೆನ್ನುವ ಆಲೋಚನೆಯಿಂದ ಸ್ಟಿಕ್ಸ್ ಎನ್ನುವ ಪವಿತ್ರ ನದಿಯಲ್ಲಿ ಮುಳುಗಿಸಿದಳಂತೆ. ಆ ನದಿಯಲ್ಲಿ ಪೂರ್ತಿಯಾಗಿ ಮುಳುಗಿದವರಿಗೆ ಸಾವಿರುವುದಿಲ್ಲ ಎನ್ನುವ ನಂಬಿಕೆಯು ಗ್ರೀಕರ ಪುರಾಣ ಕಥೆಗಳಲ್ಲಿ ಇದೆ. ಆ ತಾಯಿ ಆ ಮಗುವನ್ನು ನೀರಿನಲ್ಲಿ ಮುಳುಗಿಸುವಾಗ ಅವನ ಕಾಲಿನ ಹಿಮ್ಮಡಿಯ ಭಾಗವನ್ನು ಕೈಯಲ್ಲಿ ಹಿಡಿದುಕೊಂಡಿದ್ದಳಂತೆ. ಆದರಿಂದಾಗಿ ಅವನ ಸಂಪೂರ್ಣ ಶರೀರವು ಅವನ ಕಾಲಿನ ಹಿಮ್ಮಡಿಯನ್ನು ಹೊರತುಪಡಿಸಿ ಶಕ್ತಿವಂತವಾಯಿತಂತೆ. ಅವನ ಶರೀರದ ಮೇಲೆ ಎಷ್ಟು ಬಾಣಗಳನ್ನು ಬಿಟ್ಟರೂ ಸಹ ಅವನಿಗೆ ಯಾವುದೇ ಪ್ರಮಾದವು ಉಂಟಾಗುವುದಿಲ್ಲ. ಆದರೆ ಕಾಲಿನ ಹಿಮ್ಮಡಿಯ ಮೇಲೆ ಒಂದೇ ಒಂದು ಬಾಣವನ್ನು ಬಿಟ್ಟರೆ ಅವನಿಗೆ ಮರಣವು ತಪ್ಪದು.
ಬೆಳೆದು ದೊಡ್ಡವನಾದ ಏಚಿಲ್ಸ್ ಎಷ್ಟೋ ಯುದ್ಧಗಳಲ್ಲಿ ಪಾಲ್ಗೊಂಡು ಅದ್ಭುತವಾದ ವಿಜಯಗಳನ್ನು ಸಾಧಿಸಿದ. ಆದರೆ ಆತನ ಮನಸ್ಸಿನಲ್ಲಿ ಒಂದು ಭಯವು ಮನೆಮಾಡಿತ್ತು. ತನ್ನ ಕಾಲಿನ ಹಿಮ್ಮಡಿಯ ಮೇಲೆ ಯಾರಾದರೂ ಬಾಣ ಬಿಟ್ಟರೆ ಏನಾಗುತ್ತದೆ ಎನ್ನುವುದು. ಅವನು ಆ ವಿಷಯವನ್ನು ತನ್ನ ಆಪ್ತ ಮಿತ್ರರೊಂದಿಗೆ ಚರ್ಚಿಸುತ್ತಿದ್ದ. ಅದು ಹೇಗೋ ಬಾಯಿಂದ ಬಾಯಿಗೆ ಆ ವಿಷಯವು ಶತ್ರುಗಳ ಕಿವಿಗೆ ಬಿದ್ದಿತು. ಅದರಿಂದ ಒಬ್ಬ ಸಾಧಾರಣ ಸೈನಿಕನೊಬ್ಬನು ಬಿಟ್ಟ ಬಾಣವು ಏಚಿಲ್ಸ್‌ನ ಕಾಲಿನ ಹಿಮ್ಮಡಿಗೆ ಚುಚ್ಚಿಕೊಳ್ಳುವುದರೊಂದಿಗೆ ಅವನು ಪ್ರಾಣವನ್ನು ಕಳೆದುಕೊಂಡ.
ಅತಿರಥಮಹಾರಥರನ್ನು ನೆಲಕ್ಕುರುಳಿಸಿದ ಏಚಿಲ್ಸ್ ತನ್ನ ರಹಸ್ಯವನ್ನು ಬೇರೆಯವರೊಂದಿಗೆ ಅನವಶ್ಯಕವಾಗಿ ಹೇಳಿಕೊಂಡು ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡ. ಆವಾಗಿನಿಂದ “ಏಚಿಲ್ಸ್ ಹೀಲ್ – Achilles heel” ಎನ್ನುವ ನುಡಿಗಟ್ಟು ಬಳಕೆಯಲ್ಲಿ ಬಂದಿತು. ಅಂದರೆ ತನ್ನಲ್ಲಿರುವ ಲೋಪವನ್ನು ಪುನಃ ಪುನಃ ನೆನೆಸಿಕೊಂಡು ದುಃಖಪಡುವುದು ಅದು ಇತರರಿಗೆ ತಮ್ಮ ಮೇಲೆ ಅಧಿಕಾರವನ್ನು ಚಲಾಯಿಸುವ ಅಧಿಕಾರವನ್ನು ನಾವೇ ಕೊಟ್ಟಂತೆ.
(ಆಧಾರ: “ಹೈಂದವಿಯರು ತೆಲುಗಿನಲ್ಲಿ ಸಂಗ್ರಹಿಸಿದ ಚಿರು ದೀಪಾಲು – ಪುಟ್ಟ ಹಣತೆಗಳು ಎನ್ನುವ ಕಥಾ ಸಂಕಲನದಿಂದ ಆಯ್ದ ಕಥೆ”)